Wednesday, March 5, 2008

ಬೋರ್ಡು

ಮುನಿಯಪ್ಪ ಫೂಟ್ ವೇರ್. ಹಸಿರು ಬಣ್ಣದ ಸಣ್ಣ ಪೆಟ್ಟಿಗೆಯಂತಹ ಅಂಗಡಿಯ ಎದುರುಗಡೆ ಹಳದಿ ದಪ್ಪಕ್ಷರಗಳಲ್ಲಿ ಬೋರ್ಡು ಬರದಿತ್ತು. ಪೆಟ್ಟಿಗೆಯ ಗೋಡೆಯ ಹೊರಭಾಗದಿಂದ 'ಕರ್ನಾಟಕ ಚರ್ಮ ಕೈಗಾರಿಕಾ ನಿಗಮ ನಿಯಮಿತ' ಎಂಬ ಮತ್ತೊಂದು ಹಳದಿ ಬಣ್ಣದ ಬರಹ. ಬೆಳಿಗ್ಗೆ 9 ಕಳೆದದ್ದರಿಂದ ಪೆಟ್ಟಿಗೆಯ ಬಾಗಿಲು ತೆರೆದಿತ್ತು. ಇಲ್ಲವೆಂದಲ್ಲಿ ಮುಚ್ಚಿದ ಬಾಗಿಲ ಮೇಲೆ 'ಪೋಲಿಯೊ ಲಸಿಕೆ ಹಾಕಿಸಿ', 'ಶಿಕ್ಷಣ ಪ್ರತಿಯೊಬ್ಬನ ಹಕ್ಕು', 'ಸ್ವಚ್ಛ ಗ್ರಾಮ, ಸ್ವಚ್ಛ ದೇಶ' ಎಂಬ ವಿಧ ವಿಧದ ಬಣ್ಣಗಳು ಕಾಣಿಸುತ್ತಿದ್ದವು.

ದೊಡ್ಡದೊಂದು ಗುಲ್ ಮೊಹರ್ ಮರದ ಕೆಳಗಿರುವ ಈ ಚಪ್ಪಲಿ ರಿಪೇರಿ ಅಂಗಡಿಯನ್ನು ಎಷ್ಟು ಹೊತ್ತಿಗೆ ನೋಡಿದರೂ ತಂಪಾಗಿಯೇ ಕಾಣುತ್ತದೆ. ಅಂಗಡಿಯ ಮುಂದೆ ಪುಟ್ಟದೊಂದು ಮರದ ಸ್ಟೂಲು. ಹರಿದ ಚಪ್ಪಲಿಯನ್ನು ಮುನಿಯಪ್ಪ ಹೊಲಿದು ಕೊಡುವ ತನಕ ಅಲ್ಲಿ ಕೂರಬಹುದು. ಅರೆ ! ಆತನ ಹೆಸರು ಮುನಿಯಪ್ಪನೇ? ಅವನ ಅಪ್ಪನದೋ, ಅಜ್ಜನದೋ ಹೆಸರನ್ನಿಟ್ಟಿರಬಾರದು ಅಂಗಡಿಗೆ ಎಂದೇನೂ ಇಲ್ಲವಲ್ಲ? ಆದರೆ ಅಂಗಡಿಯೊಳಗೆ ತೀರಿಕೊಂಡ ಆತನ ಅಮ್ಮನ ಫೋಟೋ ಬಿಟ್ಟರೆ ಆಂಜನೇಯ ಸಂಜೀವಿನಿ ಹೊತ್ತು ಸಾಗುತ್ತಿರುವ ಫೋಟೋ ಒಂದಿದೆ. ದಿನವೂ ಆ ಫೋಟೋಗಳಿಗೆ ಪೂಜೆ ಮಾಡಿದ ನಂತರವೇ ಆತ ಚಪ್ಪಲಿ ರಿಪೇರಿಗೆ ಶುರುವಿಡುವುದು. ಹಾಗಾಗಿ ಎಲ್ಲರೂ ಆತನನ್ನು ಮುನಿಯಪ್ಪ ಫೂಟ್ ವೇರ್ ಎಂದೇ ಕರೆಯುವುದು.

ಬಹುಶಃ ಆತನಿಗೆ ಗಿಡ ನೆಡುವುದರಲ್ಲಿ ಆಸಕ್ತಿ ಇರಬೇಕು. ಇರುವ ಐದಡಿ ಅಗಲದ ಸ್ಥಳದಲ್ಲೇ 3-4 ಹೂಕುಂಡಗಳನ್ನು ಇಟ್ಟುಕೊಂಡು ಅದರಲ್ಲಿ ಅದ್ಯಾವ್ಯಾವುದೋ ನಮೂನೆಯ ಬಳ್ಳಿ ಹಬ್ಬಿಸಿಕೊಂಡಿದ್ದಾನೆ. ಆತನಿಗೆ ಹೆಚ್ಚೂ ಅಂದರೆ ಮೂವತ್ತಾಗಿರಬಹುದು. ಒಳ್ಳೆ ಸ್ಥಳ ನೋಡಿಯೇ ಅಂಗಡಿ ತೆರೆದಿದ್ದಾನೆ. ಇದು ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಗಿಜಿಗಿಜಿ ಎನ್ನುವ ರಿಪೇರಿ ಅಂಗಡಿಯ ತರಹ ಇಲ್ಲ. ಅಂಗಡಿಯ ಹಿಂದೊಂದು ಖಾಲಿ ಜಾಗವಿದೆ. ಅಲ್ಲೇ ಇಡೀ ಊರಿನ ಕಸ ಹಾಕುವುದು. ಹಾಗಾಗಿ ಅಂಗಡಿ ಎದುರಿಗೊಂದು ತಳ್ಳುಗಾಡಿಯೋ, ಕಸ ತುಂಬಿದ ಲಾರಿಯೋ ಇದ್ದೇ ಇರುತ್ತದೆ. ಸುಸ್ತಾದ ಆ ಗಾಡಿಯ ಮಂದಿಗೆಲ್ಲಾ ನೀರು ಸಪ್ಲೈ ಮಾಡುವುದೂ ಆತನಿಗೆ ರೂಢಿ. ಒಟ್ಟೂ ಆತ ಖಾಲಿ ಕುಳಿತದ್ದಿಲ್ಲ. ಆತನ ಅಂಗಡಿ ಎದುರು ಬರುತ್ತಲೇ ಚಪ್ಪಲಿ ಹಾಳಾಗುತ್ತದೋ ಅಥವಾ ಅಂಗಡಿ ನೋಡುತ್ತಲೇ ಸುಮ್ಮನೆ ಇರಲಿ ಎಂದು ಚಪ್ಪಲಿಗೆ ನಾಕು-ನಾಕು ಹೊಲಿಗೆ ಹಾಕಿಸುತ್ತಾರೋ? ಏನೋ ಒಂದು. ವ್ಯಾಪಾರ ಚೆನ್ನಾಗೇ ಇರಬೇಕು. ಇತ್ತೀಚೆಗೆ ಹೊಸ ಸೈಕಲ್ ಅಂಗಡಿ ಮುಂದೆ ಬಂದು ನಿಂತಿದೆ.

ಅಂಗಡಿಯ ಹಿಂದಿನ ಖಾಲಿ ಜಾಗದ ಮುಂದಿರುವ ಪುಟ್ ಪಾತ್ ಮೇಲೆ ಮಧ್ಯಾಹ್ನವಾಗುತ್ತಲೇ ಒಂದಷ್ಟು ಕೆಲಸದ ಹೆಂಗಸರು ತಮ್ಮ ಅನ್ನದ ಬುತ್ತಿ ಬಿಚ್ಚುತ್ತಿದ್ದಂತೆ ತಾನೂ ಊಟ ಮಾಡಬೇಕೆಂಬುದು ಆತನಿಗೆ ನೆನಪಾಗುತ್ತದೆ. ಕಸದ ಲಾರಿ ಡ್ರೈವರ್ ಬರುತ್ತಲೇ ಮಧ್ಯಾಹ್ನ ಮೂರು ಕಳೆಯಿತು ಎಂಬುದೂ ಗೊತ್ತಾಗುವುದು.

ಶಾಲೆಯಿಂದ ಮನೆಗೋಡುತ್ತಿರುವ ಪೋರ, ಗೇರುಬೀಜ ಫ್ಯಾಕ್ಟರಿಯಿಂದ ಹೊರಟು ಬಸ್ಸೇರಿದ ಹುಡುಗಿ, ದಿನವಿಡೀ ಕೆಲಸವಿಲ್ಲದೆ ಬೀದಿ ಸುತ್ತುವ ಅಬ್ಬೇಪಾರಿ, ಅಲ್ಲೇ ಮರದ ನೆರಳಲ್ಲಿ ಕೂತು ಬುಟ್ಟಿ ನೇಯುವ ಹೆಂಗಸರು.... ಬೆಳಿಗ್ಗೆ ರಸ್ತೆ ಗುಡಿಸುವ ಮಾಲಿಯ ಮೈಯ ದೂಳಿನಿಂದ ಹಿಡಿದು ಕಾರಿನಿಂದಿಳಿದು ಶೂ ಹೊಲಿಸಿಕೊಳ್ಳುವ ಟೈ ಮಹಾಶಯನ ಸೆಂಟ್ ವರೆಗೆ ಆತನಿಗೆ ಎಲ್ಲವೂ ಪರಿಚಯ.

ಕೆಲಸವೇ ಇಲ್ಲ, ಸ್ಟೂಲು ಖಾಲಿ, ನೀರು ಕುಡಿಯಲು ಯಾರೂ ಬಂದಿಲ್ಲ ಎಂದಾಗ ತನ್ನ ಅಂಗಡಿಯ ಮುಂದಿನ ರಸ್ತೆಯ ತುದಿಗಿರುವ ಎಲೆಕ್ಟ್ರಾನಿಕ್ ಬೋರ್ಡ್ ನ ಬದಲಾಗುತ್ತಿರುವ ಜಾಹೀರಾತು ನೋಡುತ್ತಾ ಕುಳಿತುಕೊಳ್ಳುತ್ತಾನೆ.

ಆತನ ಹೆಸರು ಮುನಿಯಪ್ಪ ಫೂಟ್ ವೇರ್ !