Monday, November 3, 2008

ಕಿಟಕಿ

ಬೀದಿ ಬದಿಯ ದೀಪದ ಬೆಳಕಿಗೆ ಆಕೆಯ ಕೋಣೆಯ ಒಳಬರುವ ಕಾತರ. ಕತ್ತಲು ಓಡಿಸಬೇಕೆಂಬ ತವಕವಿರಬೇಕು. ಆಕೆಗೋ ಅದೇ ಬೀದಿಯ ಮಬ್ಬು ದಾರಿಯ ಉದ್ದಕ್ಕೂ ಕನಸ ಚೆಲ್ಲುತ್ತಾ ಸಾಗುವಾಸೆ.

ಮುಚ್ಚಿದ್ದ ಕಿಟಕಿ ತೆರೆದಳು. ಬೆಳಕು ಒಳಬಂತು. ಆಕೆ ಸರಳುಗಳ ಹಿಡಿದು ಹೊರ ನೋಡುತ್ತಾ ನಿಂತಳು.
ಕಿಟಕಿ ತೆರೆದೇ ಇತ್ತು!

Monday, October 27, 2008

ಎರಡು ನೋಟ..


ಇಂದಿತ್ತು, ನಾಳಿಲ್ಲ, ನಿನ್ನೆ ಕಂಡದ್ದೇ ಭ್ರಮೆ..

ಎಂಥ ಸೋಜಿಗ ಸಾವು!

***************
ಎಲ್ಲೋ ಕಳೆದುಕೊಂಡಿದ್ದ ಇನ್ನೆಲ್ಲೋ ಪಡೆವ ಪ್ರಯತ್ನದಲ್ಲಿರುವ ಜಗ..

ಬದುಕು ಹುಡುಕಾಟ..

Wednesday, March 5, 2008

ಬೋರ್ಡು

ಮುನಿಯಪ್ಪ ಫೂಟ್ ವೇರ್. ಹಸಿರು ಬಣ್ಣದ ಸಣ್ಣ ಪೆಟ್ಟಿಗೆಯಂತಹ ಅಂಗಡಿಯ ಎದುರುಗಡೆ ಹಳದಿ ದಪ್ಪಕ್ಷರಗಳಲ್ಲಿ ಬೋರ್ಡು ಬರದಿತ್ತು. ಪೆಟ್ಟಿಗೆಯ ಗೋಡೆಯ ಹೊರಭಾಗದಿಂದ 'ಕರ್ನಾಟಕ ಚರ್ಮ ಕೈಗಾರಿಕಾ ನಿಗಮ ನಿಯಮಿತ' ಎಂಬ ಮತ್ತೊಂದು ಹಳದಿ ಬಣ್ಣದ ಬರಹ. ಬೆಳಿಗ್ಗೆ 9 ಕಳೆದದ್ದರಿಂದ ಪೆಟ್ಟಿಗೆಯ ಬಾಗಿಲು ತೆರೆದಿತ್ತು. ಇಲ್ಲವೆಂದಲ್ಲಿ ಮುಚ್ಚಿದ ಬಾಗಿಲ ಮೇಲೆ 'ಪೋಲಿಯೊ ಲಸಿಕೆ ಹಾಕಿಸಿ', 'ಶಿಕ್ಷಣ ಪ್ರತಿಯೊಬ್ಬನ ಹಕ್ಕು', 'ಸ್ವಚ್ಛ ಗ್ರಾಮ, ಸ್ವಚ್ಛ ದೇಶ' ಎಂಬ ವಿಧ ವಿಧದ ಬಣ್ಣಗಳು ಕಾಣಿಸುತ್ತಿದ್ದವು.

ದೊಡ್ಡದೊಂದು ಗುಲ್ ಮೊಹರ್ ಮರದ ಕೆಳಗಿರುವ ಈ ಚಪ್ಪಲಿ ರಿಪೇರಿ ಅಂಗಡಿಯನ್ನು ಎಷ್ಟು ಹೊತ್ತಿಗೆ ನೋಡಿದರೂ ತಂಪಾಗಿಯೇ ಕಾಣುತ್ತದೆ. ಅಂಗಡಿಯ ಮುಂದೆ ಪುಟ್ಟದೊಂದು ಮರದ ಸ್ಟೂಲು. ಹರಿದ ಚಪ್ಪಲಿಯನ್ನು ಮುನಿಯಪ್ಪ ಹೊಲಿದು ಕೊಡುವ ತನಕ ಅಲ್ಲಿ ಕೂರಬಹುದು. ಅರೆ ! ಆತನ ಹೆಸರು ಮುನಿಯಪ್ಪನೇ? ಅವನ ಅಪ್ಪನದೋ, ಅಜ್ಜನದೋ ಹೆಸರನ್ನಿಟ್ಟಿರಬಾರದು ಅಂಗಡಿಗೆ ಎಂದೇನೂ ಇಲ್ಲವಲ್ಲ? ಆದರೆ ಅಂಗಡಿಯೊಳಗೆ ತೀರಿಕೊಂಡ ಆತನ ಅಮ್ಮನ ಫೋಟೋ ಬಿಟ್ಟರೆ ಆಂಜನೇಯ ಸಂಜೀವಿನಿ ಹೊತ್ತು ಸಾಗುತ್ತಿರುವ ಫೋಟೋ ಒಂದಿದೆ. ದಿನವೂ ಆ ಫೋಟೋಗಳಿಗೆ ಪೂಜೆ ಮಾಡಿದ ನಂತರವೇ ಆತ ಚಪ್ಪಲಿ ರಿಪೇರಿಗೆ ಶುರುವಿಡುವುದು. ಹಾಗಾಗಿ ಎಲ್ಲರೂ ಆತನನ್ನು ಮುನಿಯಪ್ಪ ಫೂಟ್ ವೇರ್ ಎಂದೇ ಕರೆಯುವುದು.

ಬಹುಶಃ ಆತನಿಗೆ ಗಿಡ ನೆಡುವುದರಲ್ಲಿ ಆಸಕ್ತಿ ಇರಬೇಕು. ಇರುವ ಐದಡಿ ಅಗಲದ ಸ್ಥಳದಲ್ಲೇ 3-4 ಹೂಕುಂಡಗಳನ್ನು ಇಟ್ಟುಕೊಂಡು ಅದರಲ್ಲಿ ಅದ್ಯಾವ್ಯಾವುದೋ ನಮೂನೆಯ ಬಳ್ಳಿ ಹಬ್ಬಿಸಿಕೊಂಡಿದ್ದಾನೆ. ಆತನಿಗೆ ಹೆಚ್ಚೂ ಅಂದರೆ ಮೂವತ್ತಾಗಿರಬಹುದು. ಒಳ್ಳೆ ಸ್ಥಳ ನೋಡಿಯೇ ಅಂಗಡಿ ತೆರೆದಿದ್ದಾನೆ. ಇದು ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಗಿಜಿಗಿಜಿ ಎನ್ನುವ ರಿಪೇರಿ ಅಂಗಡಿಯ ತರಹ ಇಲ್ಲ. ಅಂಗಡಿಯ ಹಿಂದೊಂದು ಖಾಲಿ ಜಾಗವಿದೆ. ಅಲ್ಲೇ ಇಡೀ ಊರಿನ ಕಸ ಹಾಕುವುದು. ಹಾಗಾಗಿ ಅಂಗಡಿ ಎದುರಿಗೊಂದು ತಳ್ಳುಗಾಡಿಯೋ, ಕಸ ತುಂಬಿದ ಲಾರಿಯೋ ಇದ್ದೇ ಇರುತ್ತದೆ. ಸುಸ್ತಾದ ಆ ಗಾಡಿಯ ಮಂದಿಗೆಲ್ಲಾ ನೀರು ಸಪ್ಲೈ ಮಾಡುವುದೂ ಆತನಿಗೆ ರೂಢಿ. ಒಟ್ಟೂ ಆತ ಖಾಲಿ ಕುಳಿತದ್ದಿಲ್ಲ. ಆತನ ಅಂಗಡಿ ಎದುರು ಬರುತ್ತಲೇ ಚಪ್ಪಲಿ ಹಾಳಾಗುತ್ತದೋ ಅಥವಾ ಅಂಗಡಿ ನೋಡುತ್ತಲೇ ಸುಮ್ಮನೆ ಇರಲಿ ಎಂದು ಚಪ್ಪಲಿಗೆ ನಾಕು-ನಾಕು ಹೊಲಿಗೆ ಹಾಕಿಸುತ್ತಾರೋ? ಏನೋ ಒಂದು. ವ್ಯಾಪಾರ ಚೆನ್ನಾಗೇ ಇರಬೇಕು. ಇತ್ತೀಚೆಗೆ ಹೊಸ ಸೈಕಲ್ ಅಂಗಡಿ ಮುಂದೆ ಬಂದು ನಿಂತಿದೆ.

ಅಂಗಡಿಯ ಹಿಂದಿನ ಖಾಲಿ ಜಾಗದ ಮುಂದಿರುವ ಪುಟ್ ಪಾತ್ ಮೇಲೆ ಮಧ್ಯಾಹ್ನವಾಗುತ್ತಲೇ ಒಂದಷ್ಟು ಕೆಲಸದ ಹೆಂಗಸರು ತಮ್ಮ ಅನ್ನದ ಬುತ್ತಿ ಬಿಚ್ಚುತ್ತಿದ್ದಂತೆ ತಾನೂ ಊಟ ಮಾಡಬೇಕೆಂಬುದು ಆತನಿಗೆ ನೆನಪಾಗುತ್ತದೆ. ಕಸದ ಲಾರಿ ಡ್ರೈವರ್ ಬರುತ್ತಲೇ ಮಧ್ಯಾಹ್ನ ಮೂರು ಕಳೆಯಿತು ಎಂಬುದೂ ಗೊತ್ತಾಗುವುದು.

ಶಾಲೆಯಿಂದ ಮನೆಗೋಡುತ್ತಿರುವ ಪೋರ, ಗೇರುಬೀಜ ಫ್ಯಾಕ್ಟರಿಯಿಂದ ಹೊರಟು ಬಸ್ಸೇರಿದ ಹುಡುಗಿ, ದಿನವಿಡೀ ಕೆಲಸವಿಲ್ಲದೆ ಬೀದಿ ಸುತ್ತುವ ಅಬ್ಬೇಪಾರಿ, ಅಲ್ಲೇ ಮರದ ನೆರಳಲ್ಲಿ ಕೂತು ಬುಟ್ಟಿ ನೇಯುವ ಹೆಂಗಸರು.... ಬೆಳಿಗ್ಗೆ ರಸ್ತೆ ಗುಡಿಸುವ ಮಾಲಿಯ ಮೈಯ ದೂಳಿನಿಂದ ಹಿಡಿದು ಕಾರಿನಿಂದಿಳಿದು ಶೂ ಹೊಲಿಸಿಕೊಳ್ಳುವ ಟೈ ಮಹಾಶಯನ ಸೆಂಟ್ ವರೆಗೆ ಆತನಿಗೆ ಎಲ್ಲವೂ ಪರಿಚಯ.

ಕೆಲಸವೇ ಇಲ್ಲ, ಸ್ಟೂಲು ಖಾಲಿ, ನೀರು ಕುಡಿಯಲು ಯಾರೂ ಬಂದಿಲ್ಲ ಎಂದಾಗ ತನ್ನ ಅಂಗಡಿಯ ಮುಂದಿನ ರಸ್ತೆಯ ತುದಿಗಿರುವ ಎಲೆಕ್ಟ್ರಾನಿಕ್ ಬೋರ್ಡ್ ನ ಬದಲಾಗುತ್ತಿರುವ ಜಾಹೀರಾತು ನೋಡುತ್ತಾ ಕುಳಿತುಕೊಳ್ಳುತ್ತಾನೆ.

ಆತನ ಹೆಸರು ಮುನಿಯಪ್ಪ ಫೂಟ್ ವೇರ್ !

Saturday, February 16, 2008

ಮಾಯಾನಗರಿ

ಎಸಿ ರೂಮಿನ ಒಳಗೆ ಕಾಲಕ್ಕೆ ಬೆಲೆ ಇಲ್ಲ
ಹಗಲು ರಾತ್ರಿಗಳೆಲ್ಲ ಒಂದೆ ಇಲ್ಲಿ
ಕಪ್ಪು ರಾತ್ರಿಗೆ ಇಲ್ಲಿ ಬೆಳಗಾದ ಭಯವಿಲ್ಲ
ಹಗಲ ಭೂಮಿಗೆ ಇಲ್ಲಿ ಬಿಸಿಲೆ ಇಲ್ಲ

ಹೊರಗೆ ಅಪರೂಪಕ್ಕೆ ಕೋಗಿಲೆಯ ದನಿಯಂತೆ
ಕೀ ಬೋರ್ಡ ಶಬ್ದದಲಿ ಒಂದೆ ರಾಗ
ಸೂಟು ಬೂಟಿನ ಒಳಗೆ ಸೆಂಟಾದ ದೇಹಗಳು
ಇವರೆಲ್ಲಾ ಮಗು ಬರೆದ ಚಿತ್ರದಂತೆ!

ಸಿಗ್ನಲ್ಲು ಟ್ರಾಫಿಕ್ಕು ಪಾರ್ಕು ಪಬ್ಬುಗಳಲ್ಲಿ
ಕಳೆದು ಹೋದವು ಇನ್ನರ್ಧ ವರ್ಷ
ಓಘ ಬೋಗದ ನಡುವೆ ಭಾವಕ್ಕೆ ಬೆಲೆ ಇಲ್ಲ
ಬದುಕೆ ಹೊಂದಾಣಿಕೆ ಇಲ್ಲಿ
ಇದು ಮಾಯಾನಗರಿ!

Thursday, February 14, 2008

ಇಲ್ಲೊಂದು ದಿನ

ಬಚ್ಚಿಟ್ಟ ನವಿಲುಗರಿಯಲಿ ಕಂಡ ಮುಖವ ನೋಡುತ್ತಾ
ಮೆಲ್ಲಗೆ ನಕ್ಕರೆ
ಅದು ಪ್ರೀತಿ
ಮನದ ಬೆಳದಿಂಗಳಲಿ
ಉಸಿರಿನಲೆ ಕನಸ ಹಂಚಿಕೊಂಡರೆ
ಅದು ಪ್ರೀತಿ
ಒಲುಮೆ ದೀಪದ ಸೊಡರಲಿ
ಕ್ಷಣ ಕ್ಷಣವೂ ಹಿತವಾಗಿ
ಉರಿದು ಹೋಗುವುದು ಪ್ರೀತಿ
ಎಲ್ಲಿಯ ಮೂಢ ಜಗತ್ತು..
ಪ್ರೇಮದರ್ಚನೆಗೂ ಇಲ್ಲೊಂದು ದಿನ

Saturday, February 9, 2008

ಕೆಲ ನೋಟಗಳು

ಇನ್ನೇನು ತಲುಪಿದೆ ಎಂಬಷ್ಟರಲ್ಲೇ ಎಲ್ಲಾ ಮಾಯ...
ಅದು ಕನ್ನಡಿಯ ಮುಖ
ನಡಿಗೆ ನಡೆದಷ್ಟೂ ಇದೆ..
ಗಮ್ಯ ಗಮ್ಯಗಳಾಚೆ ಮತ್ತೊಂದು ಗಮ್ಯ!

***********

ನಾ ತೆರೆದ ಚಿತ್ರ ಮಂದಿರ
ತರತರದ ಮಂದಿ
ಅರೆಗಳಿಗೆ ನನ್ನೊಳಗೆ ಬಂಧಿ
ಜಗವೆಲ್ಲ ಮಾಯ
ಅರೆ ಗಳಿಗೆ ಕಳೆದು
ಖಾಲಿ ಪಟ, ಖಾಲಿ ನಾನು
ಮತ್ತೆ ತೆರೆವೆ
ಹೊಸ ಗಳಿಗೆ ಬರಲು!

Friday, February 8, 2008

ಬ್ಯೂಟಿ ಪಾರ್ಲರ್ ಹುಡುಗಿ

ಅವಳು ಬ್ಯೂಟಿ ಪಾರ್ಲರ್ ಹುಡುಗಿ. ಸಿಮೆಂಟ್ ಬಣ್ಣದ ಪ್ಯಾಂಟ್-ಶರ್ಟ್, ಅದರ ಮೇಲೊಂದು ಚೆಕ್ಸ್-ಚೆಕ್ಸ್ ಏಪ್ರಾನ್. ಕರ್ರಗಿನ ಮುಖ, ಮೊಡವೆ ಮುಖ, ಕೂದಲ ಮುಖ... ಆಕೆಯ ಕೈಯಲ್ಲಿ ಅವೇನೇನೋ ಮುಖಗಳು... ಸ್ಟೆಪ್ ಕಟ್, ಯು-ಕಟ್, ಫೆದರ್ ಕಟ್ ಅನ್ನುವ ಕೂದಲುಗಳು. ವ್ಯಾಕ್ಸ್ ಮಾಡಿಸುವ ಕೈ-ಕಾಲುಗಳು. ಫೇಶಿಯಲ್, ಬ್ಲೀಚಿಂಗ್, ಮಸಾಜ್ ಅನ್ನುವ ದೇಹಗಳು.. ಲೇಡಿಸ್ ಕ್ಲಬ್ ನಲ್ಲಿ ದಿನವಿಡೀ ಕೂರುವ ಬಂಗಾರದಂಗಡಿಯಂತಹ ಹೆಂಗಸು, ಹೈಸ್ಕೂಲ್ ಗೆ ಕಾಲಿಟ್ಟ ಹುಡುಗಿ, ಮದುವೆಗೆ ತಯಾರಾದ ಹೆಣ್ಣು ಎಲ್ಲರೂ ಬರುವುದು ಆಕೆಯ ಬಳಿಗೇ... ಎಲ್ಲಾ ದೇಹಗಳಿಗೂ ಸುಂದರವಾಗುವ ಚಪಲ. ಅವಳು ಬದುಕುತ್ತಿರುವುದು ಅದೇ ಚಪಲದಿಂದಾಗಿ...
ಬಂದ ದೇಹಗಳಿಗೆಲ್ಲಾ ಸಲಹೆ ನೀಡುತ್ತಾಳೆ. ತನ್ನ ಚರ್ಮದ ಬಣ್ಣ ಯಾವುದೆಂದೇ ಮರೆತಿದೆ ಆಕೆಗೆ.. ಎದುರಿಗಿರುವ ಕನ್ನಡಿಯಲ್ಲಿ ಮುಖವೇ ಕಾಣುವುದಿಲ್ಲ..
ಅವಳು ಬ್ಯೂಟಿ ಪಾರ್ಲರ್ ಹುಡುಗಿ!

Thursday, January 31, 2008

ಕಡಲು-ಕಪ್ಪೆಚಿಪ್ಪು

ಸುಮ್ಮನೆ ಕುಳಿತಿದ್ದೆ. ಬಂಡೆಗೆ ಬಂದು ಅಪ್ಪಳಿಸುತ್ತಿದ್ದ ಬೆಳ್ಳಗಿನ ನೀರು ಹೊಸ ಸ್ವರವೊಂದನ್ನು ಸೃಷ್ಟಿಸಿತ್ತು. ಶ್ರುತಿ ಹಿಡಿಯಲು ಪ್ರಯತ್ನಿಸಿದೆ. ತಾರದಲ್ಲಿತ್ತು. ಇಲ್ಲ, ಸಾಧ್ಯವಿಲ್ಲ ಎಂದು ಮತ್ತೆ ಸುಮ್ಮನಾದೆ. ಸುತ್ತೆಲ್ಲಾ ಮರಳು. ಅದರೊಳಗೆ ಅದೇನೇನೋ ಆಕಾರಗಳು. ಚಿಕ್ಕವಳಿದ್ದಾಗ ಮನೆಯ ಮುಂದಿದ್ದ ಮರಳ ರಾಶಿಯಿಂದ ಆಯುತ್ತಿದ್ದ ಆಕಾರಗಳವು. ಇನ್ನೂ ಹಾಗೇ ಇದ್ದವು. ಅರೆ! ನಾನೀಗ ಅವುಗಳ ಆಯುವುದೇ ಇಲ್ಲವಲ್ಲ? ಅದೆಷ್ಟು ಬೇಗ ಬೆಳೆಯುತ್ತೇವೆ ಎಂದೆನಿಸಿ ಹಾಗೇ ಮುಳುಗುತ್ತಿರುವ ಸೂರ್ಯನ ನೋಡುತ್ತಿದ್ದೆ. ದೂರದಲ್ಲಿ ಪುಟ್ಟ ಮಕ್ಕಳಿಬ್ಬರು ತಾರದಲ್ಲಿ ಕೂಗುತ್ತಾ ಕಪ್ಪೆಚಿಪ್ಪು ಹೆಕ್ಕುತ್ತಿದ್ದರು!